ಕಲ್ಬುರ್ಗಿ: ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಮೇ.1 ರಿಂದ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮೇ.03 ರಂದು ಕಲ್ಬುರ್ಗಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಸಂಖ್ಯೆಯಲ್ಲಿ ಜನರು ಸೇರಿರುವುದು ಉರಿ ಬಿಸಿಲನ್ನಾದರೂ ಸಹಿಸಿಕೊಳ್ಳುತ್ತೀವಿ, ಆದರೆ ಕಾಂಗ್ರೆಸ್ ನ ದುರಾಡಳಿತವನ್ನು ಮಾತ್ರ ಸಹಿಸುವುದಿಲ್ಲ ಎಂಬ ಸಂದೇಶ ರವಾನೆ ಮಾಡುವಂತಿದೆ ಎಂದು ಮೋದಿ ಹೇಳಿದ್ದಾರೆ.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಸರ್ಕಾರ ಬದಲಿಸುವ ಸಂಕಲ್ಪದ ಲಕ್ಷಣವಾಗಿದೆ, ಕಾಂಗ್ರೆಸ್ ನ್ನು ದೇಶಾದ್ಯಂತ ಜನತೆ ತಿರಸ್ಕರಿಸುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ದೋಚುವುದಕ್ಕೆ ಕಾಂಗ್ರೆಸ್ ಗೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಪ್ರತಿ ಚುನಾವಣೆಯಲ್ಲಿ ಆರೋಪ, ಪ್ರತ್ಯಾರೋಪಗಳಿರುತ್ತವೆ, ಸೋಲು ಗೆಲುವಿರುತ್ತದೆ. ಆದರೆ ಕರ್ನಾಟಕದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿರುವುದು ಕೇವಲ ಗೆಲುವಿಗಾಗಿ ಅಲ್ಲ. ಕರ್ನಾಟಕದ ಜನತೆಯ ಭವಿಷ್ಯವನ್ನು ನಿರ್ಧರಿಸಲು, ರೈತರ ಭಾಗ್ಯ ಬದಲಾವಣೆ ಮಾಡಲು, ಮಹಿಳೆಯರ ಸುರಕ್ಷತೆಗಾಗಿ ಚುನಾವಣೆ ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
"ಕಲ್ಬುರ್ಗಿಯೊಂದಿಗೆ ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ವಿಶೇಷವಾದ ನಂಟಿದೆ. ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮರು ಭಾರತದೊಂದಿಗೆ ವಿಲೀನಗೊಳ್ಳಲು ನಿರಾಜರಿಸಿದ್ದರು. ಪಟೇಲರು ನಿಜಾಮರನ್ನು ಮಣಿಸಿ ಕಲ್ಬುರ್ಗಿಯನ್ನು ಭಾರತದೊಳಗೆ ವಿಲೀನಗೊಳಿಸಿದರು, ಸ್ವಾತಂತ್ರ್ಯ ನಂತರ ನಿಜಾಮರು ಜಲಿಯನ್ ವಾಲಾಬಾಗ್ ಮಾದರಿಯ ಹಿಂಸಾಚಾರ ನಡೆಸಿದ್ದರು. ಕಲ್ಬುರ್ಗಿ ಭಾರತದಲ್ಲಿ ವಿಲೀನಗೊಳ್ಳುವುದಕ್ಕೆ ಹಲವಾರು ಯೋಧರು ಬಲಿದಾನ ಮಾಡಿದ್ದಾರೆ. ಬಲಿದಾನ ಮಾಡಿದ ಯೋಧರಿಗಾಗಿ ಸ್ಮಾರಕ ನಿರ್ಮಿಸುವ ಅವಕಾಶ ಕಾಂಗ್ರೆಸ್ ಗೆ ಇತ್ತು. ಆದರೆ ಮಾಡಲಿಲ್ಲ. ಆ ಕೆಲಸವನ್ನು ಬಿಜೆಪಿ ಯುವ ಮೋರ್ಚಾ ಮಾಡಿದೆ. ಕಾಂಗ್ರೆಸ್ ನ ಒಂದು ಪರಿವಾರಕ್ಕೆ ಪಟೇಲ್ ಅವರ ಹೆಸರು ಹೇಳಿದರೆ ನಿದ್ದೆ ಬರುವುದಿಲ್ಲ. ಕಾಂಗ್ರೆಸ್ ಗೆ ಕರ್ನಾಟಕದ ಶ್ರೇಷ್ಠ ಸೇನಾ ಅಧಿಕಾರಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಬಗ್ಗೆಯೂ ಗೌರವವಿಲ್ಲ. ಈಗಿರುವ ಸೇನಾ ಮುಖ್ಯಸ್ಥರನ್ನು ಕಾಂಗ್ರೆಸ್ ನಾಯಕರು ಗೂಂಡಾ ಎಂದು ಕರೆದಿದ್ದರು. ಅಷ್ಟೇ ಅಲ್ಲದೇ ಸೈನಿಕರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷ್ಯ ಕೇಳುತ್ತಾರೆ. ಯೋಧರು ದಾಳಿ ಮಾಡುವಾಗ ಕ್ಯಾಮರಾ ತೆಗೆದುಕೊಂಡು ಹೋಗಬೇಕೋ ಅಥವಾ ಗನ್ ತೆಗೆದುಕೊಂಡು ಹೋಗಬೇಕೋ"? ಎಂದು ಮೋದಿ ಪ್ರಶ್ನಿಸಿದ್ದಾರೆ.
ದೇಶದ ಸೇನೆ, ಯೋಧರ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ನಿಂದ ದೇಶಕ್ಕೆ ಗೌರವ ನೀಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics